ಜಿಲ್ಲಾ ಸುದ್ದಿತಾಜಾ ಸುದ್ದಿ

ಜನಸೇವೆಯೇ ನಮ್ಮ ದ್ಯೇಯ: ನೇತ್ರಾವತಿ ಪತ್ರಿಕಾ ಸಂವಾದದಲ್ಲಿ ಆಮ್‌ ಆದ್ಮಿ ಪಾರ್ಟಿ ಅಭ್ಯರ್ಥಿ ಆಶಯ

ಪ್ರಚಾರಕ್ಕೆ ಹೋದ ಸಂದರ್ಭ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಮತ್ತು ಮಳೆಗಾಲದಲ್ಲಿ ಸಂಕಷ್ಟ ಅನುಭವಿಸಿದ ನಗರದ ಜನರಿಂದ ಆಕ್ಷೇಪ ಎದುರಿಸಿದ್ದೇನೆ. ಈಗಿರುವ ಪಕ್ಷ ಮತ್ತು ಸರಕಾರಗಳ ವಿರುದ್ಧ ಜನರಲ್ಲಿ ಆಕ್ರೋಶವಿದೆ. ಶಿವಮೊಗ್ಗ ನಗರ ಹೊರಗೆ ಕಾಣುವಂತೆ ಇಲ್ಲ. ವಾರ್ಡುಗಳ ಒಳಗೆ ಸಮಸ್ಯೆಗಳು ಗಂಭೀರವಾಗಿವೆ. ಅವುಗಳ ಪರಿಚಯ ನನಗಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ ನಮ್ಮ ಉದ್ದೇಶ. ದೆಹಲಿ ಮತ್ತು ಪಂಚಾಬ್‌ರಾಜ್ಯಗಳಲ್ಲಿ ಇದು ಸಾಬೀತಾಗಿದೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿಯೇ ಎಲ್ಲವೂ ಇದೆ. ಈ ಬಗ್ಗೆ ಗಮನ ಸೆಳೆದಿದ್ದೇನೆ. ಜನ ನನಗೆ ಆಶೀರ್ವದಿಸುವ ಭರವಸೆ ಇದೆ.                          -ನೇತ್ರಾವತಿ.ಟಿ

ಶಿವಮೊಗ್ಗ: ನಗರದ ಸಮಗ್ರ ಅಭಿವೃದ್ಧಿಯೇ ಆಮ್‌ ಆದ್ಮಿ ಪಕ್ಷದ ಗುರಿ. ಈ ಬಗ್ಗೆ ಕೇವಲ ಭರವಸೆ ಕೊಡುವುದಿಲ್ಲ. ಮಾಡಿ ತೋರಿ ಸುತ್ತೇವೆ ಎಂದು ಆ ಪಕ್ಷದ  ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಟಿ. ನೇತ್ರಾವತಿ ಹೇಳಿದರು.

ಪ್ರೆಸ್‌ ಟ್ರಸ್ಟ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದ್ದ ಸಂವಾದದಲ್ಲಿ  ಅವರು ಮಾತನಾಡಿದರು.

ಬಡವರಿಗೆ ಅದರಲ್ಲೂ ಅರ್ಹರಿಗೆ ಈವರೆಗೆ ಆಶ್ರಯ ಮನೆ ಸಿಕ್ಕಿಲ್ಲ. ಆರೆಂಟು ವರ್ಷದಿಂದ ಅರ್ಜಿ ಹಾಕಿಕೊಂಡು ಮನೆ ಪಡೆಯಲು ಅಲೆದಾಟ ನಡೆಸುತ್ತಿದ್ದಾರೆ. ಈ ಸಮಸ್ಯೆ ನಿಲ್ಲಬೇಕು. ಲಾನುಭವಿಯನ್ನು ಯಾವ ತಾರತಮ್ಯವಿಲ್ಲದೆ ಗುರುತಿಸಿ, ಮನೆ ಕೊಡುವ ವ್ಯವಸ್ಥೆ ಆಗಬೇ ಕೆಂದರು.

ಪಾರ್ಕುಗಳ ನಿರ್ವಹಣೆ, ಸ್ವಚ್ಛತೆಯಲ್ಲೂ ನಗರ ಹಿಂದೆ ಬಿದ್ದಿದೆ. ಜನರಲ್ಲಿ ಈ ಬಗ್ಗೆ ಅರಿ ವನ್ನು ಮೂಡಿಸಬೇಕು.  ಮೂಲ ಸೌಕರ್ಯವನ್ನು ಕಲ್ಪಸುವುದಕ್ಕೆ ಆದ್ಯತೆ ಕೊಡಲಾಗುವುದು ಎಂದರು. ಒಂದು ವರ್ಷದಿಂದ ತಮ್ಮ ಪಕ್ಷ ಶಿವಮೊಗ್ಗದಲ್ಲಿ ಚುನಾವಣೆಯ ತಯಾರಿ ನಡೆಸಿದೆ.  ಎಲ್ಲ 35 ವಾರ್ಡುಗಳ ಓಣಿ, ರಸ್ತೆಯಲ್ಲಿರುವ ಮನೆ ಭೇಟಿ ಮಾಡಿ ಜನರ ಕುಂದುಕೊರತೆ, ಅವಶ್ಯಕತೆಯ ಪಟ್ಟಿ ಮಾಡಿದ್ದೇವೆ. ಅವರ ಬೇಡಿಕೆ ಈಡೇರಿಸಲು ಹಲವು ಹೋರಾಟ ಮಾಡಿದ್ದೇವೆಎಂದ ಅವರು, ಈಗ ಮತ್ತೆ ತಂಡಗಳಮೂಲಕ  ಮನೆ ಮನೆ ಪ್ರಚಾರ ನಡೆಸುತ್ತಿದ್ದೇವೆ ಎಂದರು.

ಪ್ರತಿ ಬೂತ್‌ ನಲ್ಲೂ ಸಮಿತಿ ರಚಿಸಲಾಗಿದೆ. ಮತದಾರರ ಸಂಪರ್ಕ ನಡೆಯುತ್ತಿದೆ.  ಜನ ಜಾಗೃತಿಯೇ ಮುಖ್ಯವಾದುದರಿಂದ ಈ ಕೆಲಸಕ್ಕೆ ಆದ್ಯತೆ ಕೊಟ್ಟಿದ್ದೇವೆ. ಮತದಾರರಿಗೆ ಯಾವುದೇ ಆಮಿಷ ನೀಡುವುದಿಲ್ಲ. ಸ್ವಚ್ಛ, ಪ್ರಾಮಾಣಿಕ ಮತ್ತು ನಿಸ್ಪಕ್ಷಪಾತ, ಪಾದರ್ಶಕ ಚುನಾವಣೆಗೆ ಆದ್ಯತೆ ಕೊಡಲಾಗುವುದು ಎಂದರು. ಮತದಾರರು ಎಎಪಿಯ ಪ್ರಣಾಳಿಕೆಯನ್ನು ಗಮನಿಸಿ ಬೆಂಬಲಿಸುತ್ತಾರೆಂಬ ನಂಬಿಕೆ ಇದೆ. ದೆಹಲಿಯಂತೆಯೇ ಜನಪರ ಆಡಳಿತವೇ ಗುರಿ ಎಂದರು. ಟ್ರಸ್ಟ್ ಅಧ್ಯಕ್ಷ ಎನ್‌. ಮಂಜುನಾಥ, ಕಾರ್ಯದರ್ಶಿ ನಾಗರಾಜ ನೇರಿಗೆ ಇದ್ದರು.