ಜಿಲ್ಲಾ ಸುದ್ದಿ

ಚಿಬ್ಬಲಗುಡ್ಡೆ ದೇವರಮೀನುಗಳಿಗೆ ಯಾವುದೇ ಸಮಸ್ಯೆ ಇಲ್ಲ

ಶಿವಮೊಗ್ಗ: ಚಿಬ್ಬಲಗುಡ್ಡೆ ಮತ್ಸ ಧಾಮದ ದೇವರ ಮೀನು ಎಂದೇ ಪ್ರಸಿದ್ದವಾಗಿರುವ ಮಹಸೀರ್‌ ಮೀನುಗಳಿಗೆ ಪ್ರಸ್ತುತ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ತೀರ್ಥಹಳ್ಳಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಚಿಬ್ಬಲಗುಡ್ಡೆ ತುಂಗಾನದಿ ಭಾಗದ 500 ಮೀಟರ್ನ್ನು ಮತ್ಸ್ಯ ಧಾಮವೆಂದು ಸರ್ಕಾರ ಘೋಷಣೆ ಮಾಡಿದೆ. ನದಿಭಾಗದ ಸುತ್ತಮುತ್ತಲಿನ ರೈತರು ಮೋಟಾರ್‌ ಅಳವ ಡಿಸಿ ನೀರನ್ನು ತೋಟಗಳಿಗೆ ಬಳಸುತ್ತಿದ್ದು ಇದರಿಂದ ನದಿಯಲ್ಲಿನ ನೀರಿನ ಮಟ್ಟ ಕಡಿಮೆಯಾಗಿ ಮೀನು ಗಳು ಮರಣ ಹೊಂದುತ್ತಿರುತ್ತದೆ ಎಂದು ಸಾರ್ವಜನಿಕರು ದೂರವಾಣಿ ಮೂಲಕ ಸಲ್ಲಿಸಿದ ದೂರಿನನ್ವಯ ಏ.19ರಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ಮತ್ತು ತೀರ್ಥಹಳ್ಳಿ ಸಹಾಯಕ ನಿರ್ದೇಶಕರು ಸ್ಥಳ ಪರಿಶೀಲನೆ ನಡೆಸಿರುತ್ತಾರೆ.

ಈ ಮತ್ಸ್ಯಧಾಮದಲ್ಲಿ ತುಂಗಾನದಿಯ ಹರಿವು ನಿಂತಿರುವುದು ಗಮನಕ್ಕೆ ಬಂದಿರುತ್ತದೆ ಮತ್ತು ತೋಟದ ಮಾಲೀಕರಿಗೆ ಮೋಟಾರನ್ನು ತೆರವುಗೊಳಿಸಲು ತಿಳಿಸಲಾಗಿ ರುತ್ತದೆ. ಮತ್ಸ್ಯ ಧಾಮದಲ್ಲಿ ಸುಮಾರು 30 ರಿಂದ 40 ದೊಡ್ಡಗಾತ್ರದ(20 ರಿಂದ 30 ಕೆಜಿ) ಮೀನುಗಳು ಹಾಗೂ ಸುಮಾರು 150 ರಿಂದ 200 ಬಲಿತ ಬಿತ್ತನೆಮರಿ ಮತ್ತು ವರ್ಷದ ಮೀನುಗಳು ಇರುತ್ತವೆ.

ಮತ್ಸ್ಯಧಾಮದ ತುಂಗಾ ನದಿಭಾಗದ ಮಡುವಿನಲ್ಲಿ 10 ಅಡಿ ನೀರು ಶೇಖರಣೆಯಿದ್ದು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಮೀನುಗಳಿಗೆ ನೀಡುವ ಆಹಾರವನ್ನು ನಿಲ್ಲಿಸುವಂತೆ ತಿಳಿಸಲು ದಡದಲ್ಲಿರುವ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದ ಸಮಿತಿಗೆ ತಿಳಿಸಲಾಗಿದೆ. ಹಾಗೂ ಸಮಿತಿಗೆ 1/2 ಹೆಚ್‌.ಪಿ.ಮೋಟಾರ್ನಿಂದ ನೀರನ್ನು ಸಿಂಪಡಿಸಲು ತಿಳಿಸಲಾಗಿದೆ. ಈ ಕುರಿತು ಕ್ರಮ ವಹಿಸಲು ದೇವಸ್ಥಾನ ಸಮಿತಿಯವರು ಒಪ್ಪಿಗೆ ನೀಡಿದ್ದು ಪ್ರಸ್ತುತ ಮೀನುಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲವೆಂದು ಅವರು ತಿಳಿಸಿದ್ದಾರೆ.