ಜಿಲ್ಲಾ ಸುದ್ದಿ

ಬಿ.ವೈಘಿ. ವಿಜಯೇಂದ್ರ ಸಹಿತ ನಾಲ್ವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಶಿಕಾರಿಪುರ: ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಸಹಿತ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಬಿಜೆಪಿಯಿಂದ ಬಿ.ವೈ ವಿಜಯೇಂದ್ರ ನಾಮಪತ್ರ ಸಲ್ಲಿಸಿದ್ದು ಇದರೊಂದಿಗೆ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಗರಾಜ ಗೌಡ ಸಹಸ್ರಾರು ಬೆಂಬಲಿಗರ ಜತೆ ಬೃಹತ್‌ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಕರ್ನಾಟಕ ರಾಜ್ಯ ವಿಕಾಸ ಪಕ್ಷದ ಅಭ್ಯರ್ಥಿಯಾಗಿ ಡಿ. ರವಿ ನಾಯ್ಕ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ತಾಲೂಕಿನ ಎಂಸಿ ಆರ್‌ಪಿ ಕಾಲೋನಿಯ ಗ್ರಾಮರ್‌ ಗಣೇಶ್‌ ನಾಮಪತ್ರ ಸಲ್ಲಿಸಿದರು.

ಬೆಳಿಗ್ಗೆ 11 ಗಂಟೆಗೆ ಬಿ.ವೈ ವಿಜಯೇಂದ್ರ ಪಟ್ಟಣದ ಕ್ಷೇತ್ರ ದೇವತೆ ಶ್ರೀ ಹುಚ್ಚು ರಾಯಸ್ವಾಮಿ ಹಾಗೂ ರಾಘವೇಂದ್ರ ಸ್ವಾಮಿ ಮಠ ನಂತರ ಕಾನೂರು ಬಸವೇಶ್ವರ ದೇವಸ್ಥಾನಕ್ಕೆ ಬೆಂಬಲಿಗರ ಜತೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಂತರದಲ್ಲಿ ತಾಲೂಕು ಕಚೇರಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಿದರು. ಇಂದು ಉತ್ತಮ ಮುಹೂರ್ತದ ಹಿನ್ನಲೆಯಲ್ಲಿ ಪತ್ನಿ ಪ್ರೇಮಾ ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್‌ ಹಾಗೂ ನ್ಯಾಯವಾದಿ ರುದ್ರಪ್ಪಯ್ಯ ಜತೆಗೆ ತೆರಳಿ ನಾಮಪತ್ರ ಸಲ್ಲಿಸಿದ ಅವರು, ನಂತರದಲ್ಲಿ ಪರ್ತಕರ್ತರ ಜತೆ ಮಾತನಾಡಿ, ಶುಭ ಮಹೂರ್ತದ ಹಿನ್ನಲೆಯಲ್ಲಿ ಇಂದು ನಾಮಪತ್ರ ಸಲ್ಲಿಸಿದ್ದು ಇದೇ 19ರ ಬುಧವಾರ ಬೆಳಿಗ್ಗೆ 9 ಕ್ಕೆ ಆರಾಧ್ಯದೈವ ಶ್ರೀ ಹುಚ್ಚು ರಾಯಸ್ವಾಮಿ ದೇವ ಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಹಸ್ರಾರು ಬೆಂಬಲಿಗರ ಜತೆ ಮೆರವಣಿಗೆ ಯಲ್ಲಿ ಪುನಃ ನಾಮಪತ್ರ ಸಲ್ಲಿಸಲಾಗುವುದು ಎಂದರು.

ಬುಧವಾರ ನಾಮಪತ್ರ ಸಲ್ಲಿಕೆ ನಂತರದಲ್ಲಿ ಬೃಹತ್‌ ಬಹಿರಂಗ ಸಭೆಯನ್ನು ಆಯೋಜಿಸಲಾಗಿದ್ದು ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ನಾರಾಯಣಸ್ವಾಮಿ, ಕಲ್ಬುರ್ಗಿ ಸಂಸದ ಉಮೇಶ್‌ ಜಾಧವ್‌, ಶಿವಮೊಗ್ಗ ಸಂಸದ ರಾಘವೇಂದ್ರ, ಶಾಸಕ ಈಶ್ವರಪ್ಪ, ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇ ಗೌಡ, ಕುಡಚಿ ಶಾಸಕ ರಾಜೀವ್‌ ಸಹಿತ ಪಕ್ಷದ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರದ ಮತದಾರರ ಬೆಂಬಲ ಆಶೀರ್ವಾದದಿಂದ ಅತೀ ಹೆಚ್ಚಿನ ಅಂತರದಿಂದ ಜಯಗಳಿಸುವ ವಿಶ್ವಾಸ ಹೊಂದಿರುವುದಾಗಿ ಅವರು ತಿಳಿಸಿದರು.