ಜಿಲ್ಲಾ ಸುದ್ದಿತಾಜಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ 75ನೇ ವರ್ಷದ ಅಮೃತ ಮಹೋತ್ಸವ: ಅಧ್ಯಕ್ಷ ಶ್ರೀಧರ್‌ ಹುಲ್ತಿಕೊಪ್ಪ

ಶಿವಮೊಗ್ಗ,ಡಿ.7: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಡಿ.10ರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್‌ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್‌ ಹುಲ್ತಿಕೊಪ್ಪ ತಿಳಿಸಿದರು.

ಅವರು ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಡಿಗ ಸಮುದಾಯ ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದು, ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಈ ನಾಡು ಕಟ್ಟುವ ಕಾಯಕದಲ್ಲಿ ಸಮುದಾಯದ ಪಾತ್ರ ಹಿರಿಯದಾದದ್ದು.  ಎಸ್‌. ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪನವರ ರಾಜಕೀಯ ಇಚ್ಚಾಶಕ್ತಿ ಹಾಗೂ ಬದ್ಧತೆಯ ಕಾರಣದಿಂದಾಗಿ ತಮ್ಮ ಅಧಿಕಾರದ ಅವಧಿಯಲ್ಲಿ ಹಲವಾರು ಜನಪರ ಹಾಗೂ ರೈತಪರ ಯೋಜನೆಗಳನ್ನು ರೂಪಿಸಿ ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಸಮುದಾಯಕ್ಕೆ ಶಕ್ತಿ ನೀಡುವ ಕೆಲಸವಾಗಿದೆ ಎಂದರು.

ಸಮುದಾಯ ಗಂಭೀರ ಸಮಸ್ಯೆಗಳಿಗೆ ನ್ಯಾಯ ಕಂಡುಕೊಳ್ಳಬೇಕಾಗಿದೆ. ಈಡಿಗ ಸೇರಿದಂತೆ 25 ಉಪ ಪಂಗಡಗಳ ಸಮಾಜ ಬಾಂಧವರು ಬೃಹತ್‌ ಸಂಖ್ಯೆಯಲ್ಲಿ ಸಮಾವೇಶಗೊಂಡು ನಮ್ಮ ಒಗ್ಗಟ್ಟಿನ ಶಕ್ತಿ ಪ್ರದರ್ಶನದ ಜೊತೆಗೆ  ಮುಖ್ಯಮಂತ್ರಿಗಳ ಗಮನ ಸೆಳೆದು ಮೂಲಭೂತ ಸಮಸ್ಯೆಗಳ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೃಹತ್‌ ಜಾಗೃತ ಸಮಾವೇಶದಲ್ಲಿ ಪಕ್ಷಾತೀತವಾಗಿ ಹಮ್ಮಿಕೊಳ್ಳಲಾಗಿದೆ ಎಂದರು.

ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮಾಜಿ ಸಚಿವರು ಸಮಾಜದ ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪ, ಖ್ಯಾತ ಚಲನಚಿತ್ರ ನಟ ಡಾ. ಶಿವರಾಜ್‌ ಕುಮಾರ್‌, ಈಡಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಅವಧೂತರು, ಶ್ರೀಕ್ಷೇತ್ರ ಸಿಂಗದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ರಾಮಪ್ಪ, ಸಚಿವ ಸಂಪುಟದ ಸಚಿವರುಗಳು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ, ಅಧ್ಯಕ್ಷತೆಯನ್ನು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ॥ ಎಂ. ತಿಮ್ಮೆಗೌಡ ವಹಿಸಲಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಮಧುಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವರುಗಳಾದ ಎಸ್‌. ಕುಮಾರ ಬಂಗಾರಪ್ಪ, ಹೆಚ್‌. ಹಾಲಪ್ಪ, ಮಾಜಿ ಶಾಸಕರುಗಳಾದ ಬಿ. ಸ್ವಾಮಿರಾವ್‌, ಡಾ॥ ಜಿ.ಡಿ. ನಾರಾಯಣಪ್ಪ ಹಾಗೂ ಸಮಾಜದ ಜಿಲ್ಲೆಯ ಹಿರಿಯ ಮುಖಂಡರು ಈ ಐತಿಹಾಸಿಕ ಸಮಾವೇಶದಲ್ಲಿ ಪಕ್ಷಾತೀತವಾಗಿ ಉಪಸ್ಥಿತರಿರುವರು.

ಈ ಸಮಾವೇಶದಲ್ಲಿ ರಾಜ್ಯದಿಂದ ಸುಮಾರು 5ಲಕ್ಷ ಹಾಗೂ ಶಿವಮೊಗ್ಗ ಜಿಲ್ಲೆಯಿಂದ ಸುಮಾರು 30 ಸಾವಿರ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘದ ಮುಖಂಡರಾದ ಕಲಗೋಡು ರತ್ನಾಕರ್‌, ಹೊನ್ನಪ್ಪ, ಜಿ.ಡಿ.ಮಂಜುನಾಥ್‌, ರವಿ, ಗಣಪತಿ, ಧರ್ಮರಾಜ್‌, ರಾಜಪ್ಪ, ರಘುಪತಿ, ಪ್ರವೀಣ್‌ ಉಪಸ್ಥಿತರಿದ್ದರು.