ಜಿಲ್ಲಾ ಸುದ್ದಿ

ಬಸವಣ್ಣನವರ ತತ್ವಾದರ್ಶದಿಂದ ಜಾತಿ ರಾಜಕಾರಣ ತೊಲಗಲಿ

ಶಿವಮೊಗ್ಗ: ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಬಸವಣ್ಣ ಶ್ರಮಿಸಿದ್ದರು. ಶೋಷಣೆ ರಹಿತ, ಸಮಾನತೆಯ ಸಮಾಜದ ತತ್ವ ಪ್ರತಿಪಾದಿಸಿ ಹೋರಾಟ ನಡೆಸಿದ್ದರು. ಆದರೆ ಇಂದಿಗೂ ಜಾತಿ ಆಧಾರದ ಮೇಲೆ ವ್ಯಕ್ತಿಳನ್ನು ಗುರುತಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಬಸವಣ್ಣನವರ ತತ್ವಾದರ್ಶಗಳ ಮೂಲಕ ಜಾತಿ ರಾಜಕಾರಣವನ್ನು ತೊಲಗಿಸಬೇಕಿದೆ ಎಂದು ಪರೋಪಕಾರಂನ ಎನ್‌.ಎಂ.  ಶ್ರೀಧರ್‌ ಹೇಳಿದರು.

ಪರೋಪಕಾರಂ ಕುಟುಂಬದ ವತಿಯಿಂದ 664ನೇ ಕಾರ್ಯಕ್ರಮದ ಭಾಗವಾಗಿ ಏ.23ರ ಭಾನುವಾರ ಬೆಳಿಗ್ಗೆ ಬಸವ ಜಯಂತಿ ನಿಮಿತ್ತ  ವಿದ್ಯಾನಗರದ ಶ್ರೀ ಮಹಾವೀರ ಗೋಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತೆ, ಗೋಪೂಜೆ ಹಾಗೂ ಗೋವುಗಳಿಗೆ ಗೋಗ್ರಾಸ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ ದೂರವಾಗದಿದ್ದಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣವಾ ಗುವುದು ಸಾಧ್ಯವಿಲ್ಲ. ಜಾತೀಯತೆಯ ವಿರುದ್ಧ ಜನಜಾಗೃತಿ ಮೂಡಬೇಕು. ಮೇಲು-ಕೀಳು, ಬಡವ- ಶ್ರೀಮಂತ ಎಂಬ ಬೇಧಭಾವ ದೂರವಾಗಬೇಕು. ಜಾತಿ, ಧರ್ಮಕ್ಕಿಂತ ಮನುಷ್ಯತ್ವ ಮುಖ್ಯ ಎಂದರು.

ಸಮಾಜಿಕ ವ್ಯವಸ್ಥೆಯ ಸ್ವರೂ ಪವು ಅದರ ನಿರ್ವಹಣೆಯನ್ನು ಅವಲಂಬಿಸಿದೆ. ಅರ್ಥ ವ್ಯವಸ್ಥೆಯ ಕಾರ್ಯದಕ್ಷತೆ ಸಮರ್ಪಕ ಆಡಳಿತದಿಂದ ನಿರ್ಧಾರವಾಗುತ್ತದೆ. ಸಮರ್ಪಕ ಆಡಳಿತಕ್ಕಾಗಿ ಸಮರ್ಥ ನಾಯಕರು ಅಗತ್ಯ. ಇಂತಹ ನಾಯಕರ ಆಯ್ಕೆ ಜಾತಿ ಆಧಾರಿ ತವಾಗಿರಬಾರದು. ಆಗ ಮಾತ್ರ ಜಾತಿ, ವರ್ಗ, ವರ್ಣ ರಹಿತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.

ಪರೋಪಕಾರಂ ಕುಟುಂಬದ ಕಾರ್ಪೆಂಟರ್‌ ಕುಮಾರ್‌, ಅನಿಲ್‌ ಹೆಗಡೆ, ಶ್ರೀಕಾಂತ್‌ ಆರ್‌., ಕಾಂತಾರ ಅಶೋಕ್‌ ಕುಮಾರ್‌, ರಾಘವೇಂದ್ರ ಎನ್‌.ಎಂ., ಕೆ.ಎಸ್‌. ವೆಂಕಟೇಶ್‌, ಅನಿಲ್‌ ಕುಮಾರ್‌ ಹೆಚ್‌. ಶಟ್ಟರ್‌, ಕಿರಣ್‌ ಆರ್‌., ಚಿನ್ಮಯ್‌ ಡಿ.ಎಸ್‌., ಮಾಲಾ ಪಾಲೇಕರ್‌, ಶ್ರೀಕಾಂತ್‌ ಹೊಳ್ಳ, ಗಂಗಾಧರ್‌, ಮತ್ತಿತರರು ಭಾಗವಹಿಸಿದ್ದರು.